ಬೂಕನಕೆರೆ ಯಡಿಯೂರಪ್ಪ ವಿಜಯೇಂದ್ರ : ಪರಿಚಯ

ಬೂಕನಕೆರೆ ಯಡಿಯೂರಪ್ಪ ವಿಜಯೇಂದ್ರ (ಜನನ ನವೆಂಬರ್ 5, 1975) ಒಬ್ಬ ಭಾರತೀಯ ರಾಜಕಾರಣಿ ಮತ್ತು ವಕೀಲರು. 2023 ರಿಂದ ಪ್ರಸ್ತುತ ಕರ್ನಾಟಕ ರಾಜ್ಯದ ಭಾರತೀಯ ಜನತಾ ಪಕ್ಷದ (ಬಿಜೆಪಿ) 11 ನೇ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕರಾಗಿ ಬಿವೈವಿ ಎಂದೇ ಖ್ಯಾತರಾಗಿರುವ ವಿಜಯೇಂದ್ರ ಅವರು ಕರ್ನಾಟಕ ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಸುಪುತ್ರರೂ ಆಗಿದ್ದಾರೆ. ಅಲ್ಲದೇ 2019 ರಲ್ಲಿ ತಮ್ಮ ತಂದೆ ಬಿ.ಎಸ್.ವೈ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

2007 ರಲ್ಲಿ ಯುವ ಮೋರ್ಚಾ ಬೆಂಗಳೂರು ಜಿಲ್ಲಾ ಕಾರ್ಯದರ್ಶಿಗಳಾಗಿ, ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರಾಗಿ, ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಪ್ರಸ್ತುತ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

2023ರ ನವೆಂಬರ್ ನಲ್ಲಿ ರಾಜ್ಯಾಧ್ಯಕ್ಷರಾದ ನಂತರ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರವಾಸ ಕೈಗೊಂಡು ಪಕ್ಷದ ತಳಮಟ್ಟದಿಂದಲೂ ಸಂಘಟನೆಗೆ ಬಲ ತುಂಬಿ, ಕಡಿಮೆ ಅವಧಿಯಲ್ಲಿಯೇ 10,000 ಕಿ.ಲೋ.ಮೀಟರ್‌ ಗೂ ಹೆಚ್ಚು ಪ್ರವಾಸ ಕೈಗೊಂಡ ಅಧ್ಯಕ್ಷರೆಂದು ಮಾಧ್ಯಮಗಳೇ ಬಣ್ಣಿಸಿವೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಮೇಲೆ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ಸಣ್ಣ ಸಣ್ಣ ಹಿಂದುಳಿದ ಸಮುದಾಯಗಳನ್ನು ಮುನ್ನೆಲೆಗೆ ತಂದು ಬಿಜೆಪಿ ಹಾಗೂ ಜೆಡಿಎಸ್ ಎನ್.ಡಿ.ಎ ಮೈತ್ರಿ ಯಶಸ್ವಿಯಾಗಲು ಶ್ರಮಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳೇ ಭಾಗಿಯಾಗಿ ಮೈಸೂರು ಮುಡಾದಲ್ಲಿ ಅಕ್ರಮವಾಗಿ ಬಡವರ ನಿವೇಶನಗಳನ್ನು ಕಬಳಿಸಿದ ಬಹುಕೋಟಿ ಭ್ರಷ್ಟಾಚಾರ ಹಗರಣದ ವಿರುದ್ಧ ರಾಜ್ಯಾದ್ಯಂತ ಹೋರಾಟ ಸಂಘಟಿಸಿ ಕಾಂಗ್ರೆಸ್ ಸರ್ಕಾರವನ್ನು ಒಂಟಿಗಾಲಿನಲ್ಲಿ ನಿಲ್ಲಿಸಿದ ಕೀರ್ತಿಯ ಜತೆಗೆ ಬೆಂಗಳೂರಿನಿಂದ ಮೈಸೂರಿಗೆ ಬೃಹತ್ “ಮೈಸೂರು ಚಲೋ” ಐತಿಹಾಸಿಕ ಪಾದಯಾತ್ರೆ ಸಂಘಟಿಸಿ ಯಶಸ್ವಿಗೊಳಿಸಿ ಕಾರ್ಯಕರ್ತರಲ್ಲಿ ನವ ಚೈತನ್ಯ ಹಾಗೂ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

2019 ರಿಂದ 2023 ರ ವರೆಗೆ ರಾಜ್ಯ ಉಪಾಧ್ಯಕ್ಷರಾಗಿ ತಮ್ಮ ಸಂಘಟನಾ ಚಾಕಚಕ್ಯತೆಯ ಮೂಲಕ ಪಕ್ಷದ ನೆಲೆಯೇ ಇಲ್ಲದ ಕೆ.ಆರ್.ಪೇಟೆ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲುವಿನ ದಡ ಸೇರಿಸುವಲ್ಲಿ ಶ್ರಮಿಸಿದ್ದಾರೆ.

 

2018 ರಲ್ಲಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಯುವ ಮತದಾರರನ್ನು ಸೆಳೆಯುವ ಮೂಲಕ ಕಾರ್ಯಕರ್ತರೊಂದಿಗೆ ಆತ್ಮೀಯ ಸಂಪರ್ಕ ಸಾಧಿಸುವಲ್ಲಿಯೂ ಯಶಸ್ವಿಯಾದರು. ಅಲ್ಲದೆ ಯುವಕರು ಪಕ್ಷದ ಪರವಾಗಿ ವಾಲುವಂತೆ ತಮ್ಮ ನಾಯಕತ್ವದ ಮೂಲಕವೇ ಸೆಳೆದರು.

ಪ್ರಸ್ತುತ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾಗಿ ಕ್ಷೇತ್ರದ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ, ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಒತ್ತು ನೀಡುತ್ತಾ ಸರ್ಕಾರದ ಯೋಜನೆಗಳನ್ನು ಅವಶ್ಯಕತೆ ಇರುವ ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಿಯಾತ್ಮಕ ಕಾರ್ಯಚಟುವಟಿಕೆಗಳನ್ನು ರೂಪಿಸಿ ಸರ್ವ ಸಮಾಜಗಳೂ ಅಪ್ಪಿ ಒಪ್ಪುವಂತೆ ಸಾರ್ವಜನಿಕರ ಸೇವೆಯಲ್ಲಿ ಸಮರ್ಪಿಸಿಕೊಂಡಿದ್ದಾರೆ.

ವಿಜಯೇಂದ್ರ ಅವರ ಕ್ರಿಯಾಶೀಲ ನಾಯಕತ್ವವು ನಿರಂತರ ಸಂಘಟನಾ ಪ್ರವಾಸದ ಮೂಲಕ ಪಕ್ಷದ ಕಾರ್ಯಕರ್ತರಿಗೆ ಸ್ಪೂರ್ತಿ ಹಾಗೂ ಸಂಘಟನೆಗೆ ಶಕ್ತಿ ತುಂಬುತ್ತಿದ್ದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಗುರಿ ಹಾಗೂ ಸಂಕಲ್ಪ ತೊಟ್ಟು ವಿರಮಿಸದೇ ಶ್ರಮಿಸುತ್ತಿರುವ ವ್ಯಕ್ತಿಯಾಗಿದ್ದಾರೆ.